ಗಲಿ ಬಾಯ್ ೨೦೧೯ರ ಒಂದು ಹಿಂದಿ ಸಂಗೀತಪ್ರಧಾನ ನಾಟಕೀಯ ಚಲನಚಿತ್ರ. ಇದನ್ನು ಜ಼ೋಯಾ ಅಖ್ತರ್ ನಿರ್ದೇಶಿಸಿದ್ದಾರೆ ಮತ್ತು ಜ಼ೋಯಾ ಅಖ್ತರ್ ಹಾಗೂ ರೀಮಾ ಕಾಗ್ತಿ ಬರೆದಿದ್ದಾರೆ. ಚಿತ್ರವನ್ನು ಟೈಗರ್ ಬೇಬಿ ಫ಼ಿಲ್ಮ್ಸ್ ಹಾಗೂ ಎಕ್ಸೆಲ್ ಎಂಟರ್ಟೆನ್‍ಮಂಟ್ ಪ್ರೊಡಕ್ಷನ್ಸ್ ಲಾಂಛನದಡಿ ರಿತೇಶ್ ಸಿಧ್ವಾನಿ, ಜ಼ೋಯಾ ಅಖ್ತರ್ ಹಾಗೂ ಫರಾನ್ ಅಖ್ತರ್ ನಿರ್ಮಾಣ ಮಾಡಿದ್ದಾರೆ. ನಾಸ್ ಚಿತ್ರದ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದಾರೆ. ಮುಖ್ಯ ಪಾತ್ರಗಳಲ್ಲಿ ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟಿಸಿದ್ದರೆ, ಪೋಷಕ ಪಾತ್ರಗಳಲ್ಲಿ ಕಲ್ಕಿ ಕೆಕ್ಲ್ಞಾ, ಸಿದ್ಧಾಂತ್ ಚತುರ್ವೇದಿ ಮತ್ತು ವಿಜಯ್ ರಾಜ಼್ ನಟಿಸಿದ್ದಾರೆ. ಭಾರತೀಯ ಬೀದಿ ರ್‍ಯಾಪರ್‌ಗಳಾದ ಡಿವೈನ್ ಮತ್ತು ನೇಜ಼ಿಯ ಜೀವನಗಳಿಂದ ಸ್ಫೂರ್ತಿಪಡೆದ ಈ ಚಿತ್ರವು ಮುಂಬಯಿಯ ಧಾರಾವಿ ಕೊಳಗೇರಿ ಪ್ರದೇಶಗಳ ಒಬ್ಬ ಆಕಾಂಕ್ಷಿ ಬೀದಿ ರ್‍ಯಾಪರ್ ಬಗ್ಗೆ ಇರುವ ಪ್ರೌಢತ್ವಕ್ಕೆ ಬರುವ ಕಥೆಯಾಗಿದೆ.. ಗಲಿ ಬಾಯ್ ಚಿತ್ರದ ಪ್ರಧಾನ ಛಾಯಾಗ್ರಹಣವು ಜನವರಿ ೨೦೧೮ರಲ್ಲಿ ಆರಂಭವಾಗಿ ಏಪ್ರಿಲ್ ೨೦೧೮ರಲ್ಲಿ ಮುಕ್ತಾಯವಾಯಿತು. ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ೯ ಫ಼ೆಬ್ರುವರಿ ೨೦೧೯ರಂದು ಈ ಚಿತ್ರದ ಪ್ರಥಮ ಪ್ರದರ್ಶನವಾಯಿತು. ಈ ಚಿತ್ರವು ೧೫ ಫ಼ೆಬ್ರುವರಿ ೨೦೧೯ರಂದು ಬಿಡುಗಡೆಯಾಗಿ ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಜಾಗತಿಕವಾಗಿ $37 ದಶಲಕ್ಷಕ್ಕಿಂತ ಹೆಚ್ಚು ಗಳಿಸಿದ ಈ ಚಿತ್ರವು ವರ್ಷದ ಏಳನೇ ಅತಿ ಹೆಚ್ಚು ಹಣಗಳಿಸಿದ ಹಿಂದಿ ಚಿತ್ರವೆಂದು ಹೊರಹೊಮ್ಮಿತು. ೯೨ನೇ ಅಕ್ಯಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರಕ್ಕೆ ಭಾರತೀಯ ಸ್ಪರ್ಧಿಯಾಗಿ ಈ ಚಿತ್ರವನ್ನು ಆಯ್ಕೆಮಾಡಲಾಯಿತು, ಆದರೆ ಈ ಚಿತ್ರವು ನಾಮನಿರ್ದೇಶನಗೊಳ್ಳಲಿಲ್ಲ. ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ (ಸಿಂಗ್) ಮತ್ತು ಅತ್ಯುತ್ತಮ ನಟಿ ಪ್ರಶಸ್ತಿ ಸೇರಿದಂತೆ, ಗಲಿ ಬಾಯ್ ದಾಖಲೆ ೧೩ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಗೆದ್ದಿತು ಮತ್ತು ಕುಛ್ ಕುಛ್ ಹೋತಾ ಹೆ (೧೯೯೮) ನಂತರ ಎಲ್ಲ ನಾಲ್ಕು ನಟನಾ ಪ್ರಶಸ್ತಿಗಳನ್ನು ಗೆದ್ದ ಎರಡನೇ ಚಿತ್ರವೆನಿಸಿಕೊಂಡಿತು. == ಕಥಾವಸ್ತು == ಅಂತಿಮ ವರ್ಷದ ಕಾಲೇಜು ವಿದ್ಯಾರ್ಥಿಯಾದ ಮುರಾದ್ ಅಹ್ಮದ್ (ರಣ್‍ವೀರ್ ಸಿಂಗ್) ಮುಂಬಯಿಯ ಧಾರಾವಿ ಕೊಳೆಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿರುತ್ತಾನೆ. ಅವನ ನಿಂದಿಸುವ ಅಪ್ಪ ಆಫ಼್ತಾಬ್ ಶಾಕಿರ್ ಅಹ್ಮದ್ (ವಿಜಯ್ ರಾಜ಼್) ಬಹಳ ಯುವ ಎರಡನೇ ಹೆಂಡತಿಯನ್ನು ಮನೆಗೆ ತರುತ್ತಾನೆ. ಇದು ಕುಟುಂಬಕ್ಕೆ ಬಹಳ ಯಾತನೆ ಉಂಟುಮಾಡುತ್ತದೆ. ಮುರಾದ್ ರ್‍ಯಾಪ್ ಸಂಗೀತದ ಬಗ್ಗೆ ಮೋಹ ಬೆಳೆಸಿಕೊಂಡಿರುತ್ತಾನೆ. ಅವನ ದೀರ್ಘಕಾಲದ ಮತ್ತು ಪ್ರತ್ಯಕ್ಷವಾಗಿ ಸ್ವಾಮ್ಯ ಪ್ರವೃತ್ತಿಯ ಗೆಳತಿ ಸಫ಼ೀನಾ ಫ಼ಿರ್ದೌಸಿ (ಆಲಿಯಾ ಭಟ್) ಶಸ್ತ್ರವೈದ್ಯೆಯಾಗಲು ತರಬೇತಿ ಪಡೆಯುತ್ತಿರುತ್ತಾಳೆ ಮತ್ತು ಅವನನ್ನು ವಾಡಿಕೆಯಿಂದ ರಹಸ್ಯವಾಗಿ ಭೇಟಿಯಾಗುತ್ತಿರುತ್ತಾಳೆ. ಅವನ ತಂದೆ ಗಾಯಗೊಂಡ ನಂತರ ಅವನು ಅರೆಕಾಲಿಕವಾಗಿ ಕಾರುಚಾಲಕನಾಗಿ ಕೆಲಸಮಾಡಬೇಕಾಗುತ್ತದೆ. ಈ ಸಮಯದಲ್ಲಿ ಮುರಾದ್ ಬರೆಯಲು ಆರಂಭಿಸುತ್ತಾನೆ, ಮತ್ತು ಅವನ ಸಾಹಿತ್ಯವು ಅವನು ಕೆಲಸ ಮಾಡುವಾಗ ಗಮನಿಸುವ ಅಸಮಾನತೆಗಳಿಂದ ಪ್ರೇರಿತವಾಗಿರುತ್ತದೆ. ತನ್ನ ಕಾಲೇಜಿನ ಉತ್ಸವದಲ್ಲಿ ಪ್ರದರ್ಶನ ನೀಡಿದ್ದಾಗ ನೋಡಿ ಸ್ಥಳೀಯ ರ್‍ಯಾಪರ್ ಶ್ರೀಕಾಂತ್ "ಎಮ್‍ಸಿ ಶೇರ್" ಭೋಸ್ಲೆಯ ಪರಿಚಯವಾಗಿ (ಸಿದ್ಧಾಂತ್ ಚತುರ್ವೇದಿ), ಮುರಾದ್ ಭೂಗತ ಕಾರ್ಯಕ್ರಮಗಳು ಮತ್ತು ರ್‍ಯಾಪ್ ಕಾಳಗಗಳಲ್ಲಿ ತನ್ನ ಸಾಹಿತ್ಯವನ್ನು ಪ್ರದರ್ಶಿಸುವುದಕ್ಕೆ ಆಕರ್ಷಿತನಾಗುತ್ತಾನೆ ಮತ್ತು ಅಂತಿಮವಾಗಿ ಯೂಟ್ಯೂಬ್‍ಗೆ ಒಂದು ವೀಡಿಯೊವನ್ನು ಅಪ್‍ಲೋಡ್ ಮಾಡುತ್ತಾನೆ. ವೀಡಿಯೊವನ್ನು ನೋಡಿದ ನಂತರ, ಬೆಳೆಯುತ್ತಿರುವ ಸಂಗೀತಗಾರ್ತಿಯಾದ ಬರ್ಕಲಿ ಕಾಲೇಜಿನ ವಿದ್ಯಾರ್ಥಿನಿ ಶ್ವೇತಾ "ಸ್ಕೈ" ಮೆಹ್ತಾ (ಕಲ್ಕಿ ಕೆಕ್ಲ್ಞಾ) ಮುರಾದ್‍ ಮತ್ತು ಶೇರ್‌ರನ್ನು ಸಂಪರ್ಕಿಸಿ ಒಂದು ಹೊಸ ಹಾಡಿನ ಮೇಲೆ ಒಟ್ಟಾಗಿ ಕೆಲಸ ಮಾಡುವ ಪ್ರಸ್ತಾಪ ಮಾಡುತ್ತಾಳೆ. ಧಾರಾವಿಯಲ್ಲಿ ಚಿತ್ರೀಕರಿಸಲಾದ ಜೊತೆಗಿರುವ ವೀಡಿಯೊ ಕ್ಷಿಪ್ರವಾಗಿ ಜನಪ್ರಿಯವಾಗುತ್ತದೆ. ಮುರಾದ್ ಸ್ಕೈಳೊಂದಿಗೆ ಒಂದು ನಿಕಟ ಕ್ಷಣವನ್ನು ಹಂಚಿಕೊಳ್ಳುತ್ತಾನೆ, ಮತ್ತು ನಂತರ ಸಫ಼ೀನಾಗೆ ಅದರ ಬಗ್ಗೆ ಸುಳ್ಳು ಹೇಳುತ್ತಾನೆ. ಸಫ಼ೀನಾಗೆ ಸತ್ಯ ಗೊತ್ತಾದಾಗ, ಅವಳು ಸ್ಕೈ ವಿರುದ್ಧ ಹಿಂಸಾತ್ಮಕವಾಗಿ ವರ್ತಿಸಿ ಸ್ಕೈ ತಲೆಗೆ ಬಿಯರ್‌ನ ಬಾಟಲಿಯಿಂದ ಹೊಡೆಯುತ್ತಾಳೆ. ಪರಿಣಾಮವಾಗಿ, ಅವಳನ್ನು ಪೋಲಿಸರು ಕರೆತರುತ್ತಾರೆ ಆದರೆ ಸ್ಕೈ ಅವಳ ವಿರುದ್ಧ ದೂರು ನೀಡದಿದ್ದರಿಂದ ಅವಳನ್ನು ಬಂಧಿಸಲಾಗುವುದಿಲ್ಲ. ಅಂತಿಮವಾಗಿ ಅವಳ ಸ್ವಾಮ್ಯಸೂಚಕ ಮನೋಭಾವದ ಕಾರಣ ಮುರಾದ್ ಸಫ಼ೀನಾಳೊಂದಿಗೆ ಸಂಬಂಧ ಕಡಿದುಕೊಳ್ಳುತ್ತಾನೆ. ತನ್ನ, ತನ್ನ ಸೋದರ, ಮತ್ತು ತನ್ನ ತಾಯಿಯ ವಿಷಯದಲ್ಲಿ ಆಫ಼್ತಾಬ್‍ನ ಹಿಂಸೆ ಹೆಚ್ಚಾದಾಗ, ಮುರಾದ್ ತನ್ನ ತಾಯಿ ಮತ್ತು ಸೋದರನೊಂದಿಗೆ ಮನೆ ಬಿಟ್ಟು ಪೂರ್ಣ ಸಮಯ ತನ್ನ ಚಿಕ್ಕಪ್ಪ ಅತೀಕ್ ಖಾನ್‍ನಿಗಾಗಿ (ವಿಜಯ್ ಮೌರ್ಯ) ಕೆಲಸಮಾಡಲು ನಿರ್ಧರಿಸುತ್ತಾನೆ. ನಂತರ, ಸ್ಕೈ ಅವನ ಬಗ್ಗೆ ತನಗಿರುವ ಪ್ರೇಮದ ಅನಿಸಿಕೆಗಳನ್ನು ವ್ಯಕ್ತಪಡಿಸಿದಾಗ, ಅವನು ಇನ್ನೂ ಸಫ಼ೀನಾಳನ್ನು ಪ್ರೀತಿಸುತ್ತಿರುವುದರಿಂದ ಅವಳನ್ನು ನಿರಾಕರಿಸಿ ಸಫ಼ೀನಾಳೊಂದಿಗೆ ರಾಜಿ ಮಾಡಿಕೊಳ್ಳಲು ನಿರ್ಧರಿಸುತ್ತಾನೆ. ನ್ಯಾಸ್‍ನೊಂದಿಗೆ ಅವನ ಮುಂಬೈ ಸಂಗೀತ ಮೇಳದಲ್ಲಿ ಪ್ರದರ್ಶನ ನೀಡಲು ಮುರಾದ್ ಮತ್ತು ಶೇರ್ ಒಂದು ಸ್ಪರ್ಧೆಯನ್ನು ಪ್ರವೇಶಿಸುತ್ತಾರೆ. ಒಂದು ಯಶಸ್ವಿ ರ್‍ಯಾಪ್ ಕಾಳಗದ ನಂತರ ಮುರಾದ್ ಫ಼ೈನಲ್ ಪ್ರವೇಶಿಸುತ್ತಾನೆ. ತನ್ನ ಪ್ರದರ್ಶನಗಳ ಬಗ್ಗೆ ರ್‍ಯಾಪ್ ಅಭಿಮಾನಿಗಳ ಮೆಚ್ಚುಗೆ ಮತ್ತು ಅವರೊಂದಿಗೆ ಭೇಟಿಯಾದಾಗ ಮುರಾದ್‍ನ ಆತ್ಮವಿಶ್ವಾಸ ಬೆಳೆಯುತ್ತದೆ. ಅಂತಿಮವಾಗಿ ಆಫ಼್ತಾಬ್ ಮತ್ತು ಅತೀಕ್ ಅವನ ತೀವ್ರಾಸಕ್ತಿಯನ್ನು ತೃಣೀಕರಿಸಿದಾಗ ಅವನು ಅದಕ್ಕೆ ಆಕ್ಷೇಪಿಸುತ್ತಾನೆ. ನಂತರ ಅವನು ಸಫ಼ೀನಾಳೊಂದಿಗೆ ರಾಜಿ ಮಾಡಿಕೊಳ್ಳುತ್ತಾನೆ. ಅವನು ಸ್ಪರ್ಧೆಯನ್ನು ಗೆದ್ದು ಭಾರತದ ಅಗ್ರ ರ್‍ಯಾಪರ್‌ಗಳಲ್ಲಿ ಒಬ್ಬನಾಗುತ್ತಾನೆ. ಅವನು ತನ್ನ ಆರಂಭಿಕ ಪ್ರದರ್ಶನವನ್ನು ಆರಂಭಿಸುವುದನ್ನು ಅವನ ಸ್ನೇಹಿತರು, ಕುಟುಂಬ ಮತ್ತು ಸಫ಼ೀನಾ ಸಂತೋಷದಿಂದ ನೋಡುತ್ತಿರುವುದರೊಂದಿಗೆ ಚಲನಚಿತ್ರವು ಮುಗಿಯುತ್ತದೆ. == ಪಾತ್ರವರ್ಗ == == ಧ್ವನಿವಾಹಿನಿ == ಧ್ವನಿವಾಹಿನಿಯಲ್ಲಿ ೧೮ ಹಾಡುಗಳಿದ್ದು ಇದನ್ನು ೧೨ ಜನವರಿ ೨೦೧೯ರಂದು ಬಿಡುಗಡೆ ಮಾಡಲಾಯಿತು. == ಮಾರಾಟಗಾರಿಕೆ ಮತ್ತು ಬಿಡುಗಡೆ == ಚಿತ್ರದ ಮೊದಲ ನೋಟದ ಅಧಿಕೃತ ಭಿತ್ತಿಪತ್ರವನ್ನು ೧ ಜನವರಿ ೨೦೧೯ರಂದು ಬಿಡುಗಡೆ ಮಾಡಲಾಯಿತು. ಚಿತ್ರದ ಅಧಿಕೃತ ಟ್ರೇಲರ್‌ನ್ನು ೯ ಜನವರಿ ೨೦೧೯ರಂದು ಬಿಡುಗಡೆ ಮಾಡಲಾಯಿತು. ಕೆಲವು ಬರಹಗಾರರು ಗಲಿ ಬಾಯ್ ಮತ್ತು ಎಮಿನೆಮ್ ಅಭಿನಯದ ಏಟ್ ಮೈಲ್ (೨೦೦೨) ಚಿತ್ರದ ನಡುವಿನ ಹೋಲಿಕೆಗಳ ಬಗ್ಗೆ ಅನುಮಾನಿಸಿದರು. ಆದರೆ ನಿರ್ದೇಶಕಿ ಜ಼ೋಯಾ ಅಖ್ತರ್ ಈ ಆರೋಪಗಳನ್ನು ನಿರಾಕರಿಸಿದರು. === ಹೋಮ್ ವೀಡಿಯೊ === ಚಿತ್ರವನ್ನು ವಿಒಡಿ ಆಗಿ ಪ್ರೈಮ್ ವೀಡಿಯೊದಲ್ಲಿ ೧೬ ಎಪ್ರಿಲ್ ೨೦೧೯ ರಂದು ಲಭ್ಯವಾಗಿಸಲಾಯಿತು. == ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ == === ವಿಮರ್ಶಾತ್ಮಕ ಪ್ರತಿಕ್ರಿಯೆ === ಗಲಿ ಬಾಯ್ ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯುತು. ಅಖ್ತರ್‌ರ ನಿರ್ದೇಶನ, ಮೌರ್ಯರ ಸಂಭಾಷಣೆ ಮತ್ತು ಸಿಂಗ್, ಚತುರ್ವೇದಿ ಹಾಗೂ ಭಟ್‍ರ ಅಭಿನಯಗಳನ್ನು ಪ್ರಶಂಸಿಸಲಾಯಿತು. === ಬಾಕ್ಸ್ ಆಫ಼ಿಸ್ === ಈ ಚಲನಚಿತ್ರವು ಭಾರತದಲ್ಲಿ ₹೧೬೫.೫೮ ಕೋಟಿ ಮತ್ತು ವಿದೇಶದಲ್ಲಿ ₹೭೨.೫೮ ಕೋಟಿಯಷ್ಟು ಗಳಿಸಿತು ಮತ್ತು ಇದರ ಒಟ್ಟಾರೆ ವಿಶ್ವಾದ್ಯಂತ ಹಣಗಳಿಕೆಯು ₹೨೪೫.೨೧ ಕೋಟಿಯಷ್ಟಾಯಿತು. == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == ಈ ಚಲನಚಿತ್ರವು ೬೫ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ೧೩ ಪ್ರಶಸ್ತಿಗಳನ್ನು ಗೆದ್ದು ೨೦೦೬ರಲ್ಲಿ ೧೧ ಪ್ರಶಸ್ತಿಗಳನ್ನು ಗೆದ್ದ ಬ್ಲ್ಯಾಕ್ ಚಿತ್ರದ ದಾಖಲೆಯನ್ನು ಮುರಿಯಿತು. ಜೊತೆಗೆ, ಈ ಚಿತ್ರವು ೨೬ನೇ ಸ್ಕ್ರೀನ್ ಪ್ರಶಸ್ತಿ ಸಮಾರಂಭದಲ್ಲಿ ೧೨ ಪ್ರಶಸ್ತಿಗಳು ಮತ್ತು ಜ಼ೀ ಸಿನೆ ಪ್ರಶಸ್ತಿ ಸಮಾರಂಭದಲ್ಲಿ ೯ ಪ್ರಶಸ್ತಿಗಳನ್ನು ಗೆದ್ದಿತು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಗಲಿ ಬಾಯ್ @ ಐ ಎಮ್ ಡಿ ಬಿ ಗಲಿ ಬಾಯ್